“Book Descriptions: ಒಂದೆರಡು ದೆವ್ವದ ಕತೆ ಬರೆದ ನಂತರ 'ನೀವು ದೆವ್ವಗಳನ್ನು ನೋಡಿದ್ದೀರಾ?' ಅಂತ ಅನೇಕರು ನನ್ನನ್ನು ಕೇಳುತ್ತಿದ್ದರು. ಆಗೆಲ್ಲ ನಾನು ಖಚಿತವಾದ ಧ್ವನಿಯಲ್ಲಿ 'ನೋಡಿದ್ದೇನೆ' ಅಂತ ಹೇಳುತ್ತಿದ್ದೆ. ಅವರು 'ನಾವೂ ದೆವ್ವಗಳನ್ನು ನೋಡಬೇಕು' ಅನ್ನುತ್ತಿದ್ದರು. 'ನಮ್ಮೂರಿಗೆ ಬನ್ನಿ, ತೋರಿಸುತ್ತೇನೆ' ಎಂದು ಅವರಿಗೆ ಆಹ್ವಾನ ಕೊಡುತ್ತಿದ್ದೆ. ಹೀಗೆ ಹಲವು ಮಿತ್ರರನ್ನು ನಮ್ಮೂರಿಗೆ ಕರೆದೊಯ್ದು ದೆವ್ವಗಳನ್ನೂ ಪಿಶಾಚಿಗಳನ್ನೂ ತೋರಿಸಿದ್ದೆ.
ಇತ್ತೀಚೆಗೆ ನನ್ನ ಮಗಳು ಖುಷಿಗೆ ದೆವ್ವ ನೋಡುವ ಆಸೆಯಾಯಿತು. ಅವಳನ್ನು ಕರೆದುಕೊಂಡು ನಮ್ಮೂರಿಗೆ ಹೋದೆ. ನಡುರಾತ್ರಿ ದೆವ್ವ ವಾಸ ಮಾಡುತ್ತಿದ್ದ ಮರ ಇದ್ದ ಜಾಗಕ್ಕೆ ಹೋಗಿ ನೋಡಿದರೆ, ದೆವ್ವ ವಾಸಿಸುತ್ತಿದ್ದ ಹುಣಸೇ ಮರವನ್ನು ಯಾರೋ ಕಡಿದು ಹಾಕಿದ್ದರು. ಅದೇ ಜಾಗದಲ್ಲಿ ಯಾವುದೋ ಫ್ಯಾಕ್ಟರಿ ಕಟ್ಟಿದ್ದರು. ದೆವ್ವ ಯಾವುದೋ ಬೇರೆ ಮರ ಹುಡುಕಿಕೊಂಡು ಹೋಗಿರಬೇಕು ಅಂದುಕೊಂಡು ಊರುತುಂಬ ಹುಡುಕಾಡಿದೆವು. ದೆವ್ವ ವಾಸಿಸಲಿಕ್ಕೆ ಅನುಕೂಲಕರವಾದ ಒಂದೇ ಒಂದು ಮರವನ್ನು ನಮ್ಮೂರಿನ ಮಂದಿ ಉಳಿಸಿರಲಿಲ್ಲ. ಎಲ್ಲೆಲ್ಲೂ ಬೀದಿ ದೀಪಗಳನ್ನು ಹಾಕಿ, ದೆವ್ವಕ್ಕೆ ಬೇಕಾದ ಕತ್ತಲನ್ನೂ ಕೂಡ ಕಸಿದುಕೊಂಡಿದ್ದರು.
ಈಗ ನಿಮಗೆ ದೆವ್ವ ಪಿಶಾಚಿಗಳು ಸಿಗುವುದು ಈ ಪುಸ್ತಕದಲ್ಲಿ ಮಾತ್ರ.” DRIVE