“Book Descriptions: “ಈ ಕೃತಿಯ ಸ್ವರೂಪ ವಿಸ್ಮಯಗೊಳಿಸುವಷ್ಟು ಹೊಸತಾಗಿದೆ. ಇದು ಇತಿಹಾಸವೋ, ದಂತಕತೆಯೋ, ಜಾನಪದ ಆಖ್ಯಾಯಿಕೆಯೋ, ಕಾವ್ಯಮಯ ಕಥನವೋ ಎಂದು ವರ್ಗೀಕರಿಸಲು ಯತ್ನಿಸುವುದು ಅದರ ಶ್ರೀಮಂತ ಕ್ರಿಯಾಪರಿಸರಕ್ಕೇ ಅನ್ಯಾಯ ಬಗೆದಂತೆ. ಟೀಪು ಸುಲ್ತಾನನ ಕಾಲದ ಒಬ್ಬ ದಳವಾಯಿಯ ಕತೆಯೆಂದು ಆರಂಭವಾಗುವ ಈ ಕಥಾನಕ ಈ ಎಲ್ಲ ಪ್ರಕಾರಗಳನ್ನು ಬಳಸುತ್ತ ಒಂದರಿಂದ ಇನ್ನೊಂದಕ್ಕೆ ಸಲೀಸಾಗಿ ಜಾರುತ್ತ, ದೇಶಕಾಲಗಳ ಸೀಮೆ ದಾಟುತ್ತ, ಹಿಮ್ಮೆಟ್ಟುತ್ತ ಹೋಗುತ್ತದೆ. ಕೃಷ್ಣಮೂರ್ತಿ ಹನೂರರ ಬರವಣಿಗೆಯ ಅದ್ಭುತ ಚಿತ್ರಕ ಶಕ್ತಿ ಈ ಎಲ್ಲ ಬೇರೆ ಬೇರೆ ಲೋಕಗಳ ವಾಸ್ತವ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಪುನಃಸೃಷ್ಟಿಸುತ್ತದೆ. ಅದರ ಜೊತೆಗೇ ಪಾತ್ರಗಳ, ಸನ್ನಿವೇಶಗಳ ಭಾವನಾತ್ಮಕ ತುಮುಲಗಳ ನೈಜತೆ ಕೂಡ ಒಮ್ಮೆ ಓದಲಾರಂಭಿಸಿದರೆ ಕೊನೆಯ ಪುಟದವರೆಗೂ ಕೆಳಗಿಡಲಾಗದಂತೆ ವಾಚಕನನ್ನು ತನ್ನ ಸೆಳವಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಹನೂರರ ವಿದ್ವತ್ತೆ, ಕಲ್ಪನಾ ಶಕ್ತಿ, ಇವೆರಡನ್ನೂ ತಳಕು ಹಾಕಿರುವ ಸ್ವೋಪಜ್ಞತೆ ಬೆರಗುಗೊಳಿಸುವಂಥವು.”